ರೇಷ್ಮೆಗೂಡಿನ ಬೆಲೆ ದಿಡೀರ್ ಏರಿಕೆ: ಕೆಜಿ ರೇಷ್ಮೆ ಗೂಡಿಗೆ ಎಷ್ಟಿದೆ ದರ? ಇಲ್ಲಿದೆ ವಿವರ

ವೀರಾಪುರ ಮಂಜುನಾಥ್‌ ಶಿಡ್ಲಘಟ್ಟ
ಬೆಂಗಳೂರು: ಕುಸಿದಿದ್ದ ರೇಷ್ಮೆಗೂಡಿನ ಬೆಲೆ ದಿನ ಕಳೆದಂತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕಳೆದ ವಾರದಿಂದೀಚೆಗೆ ಬೆಲೆ ಏರತೊಡಗಿದ್ದು ಒಂದು ಕೆ.ಜಿ.ರೇಷ್ಮೆಗೂಡಿನ ಬೆಲೆ 350 ರೂ.ಗಳ ಗಡಿ ದಾಟಿದೆ. ಸರಾಸರಿ ಬೆಲೆಯೂ 300 ರೂಪಾಯಿಗಳ ಗಡಿ ಮುಟ್ಟಿದೆ.
 
ಲಾಕ್‌ಡೌನ್‌ ದಿನಗಳು ಆರಂಭವಾಗುತ್ತಿದ್ದಂತೆ 450 ರೂಪಾಯಿಗಳ ಆಸುಪಾಸಿನಲ್ಲಿದ್ದ ರೇಷ್ಮೆಗೂಡಿನ ಬೆಲೆ ಕುಸಿಯಲಾರಂಭಿಸಿ ಗರಿಷ್ಠ ಬೆಲೆ 250ರ ಆಸುಪಾಸಿಗೆ ಬಂದು ನಿಂತಿತ್ತು.
 
ಕುಸಿದಿದ್ದ ಬೆಲೆ, ಬೇಡಿಕೆ:
ಮದುವೆ ಮುಂತಾದ ಶುಭ ಸಮಾರಂಭಗಳು ಸಂಪೂರ್ಣವಾಗಿ ಸ್ಥಗಿತಗೊಂಡ ಕಾರಣ ರೇಷ್ಮೆ ವಸ್ತ್ರಗಳ ಮಾರಾಟ ಇಲ್ಲದ ಕಾರಣ ಬೇಡಿಕೆ ಇಲ್ಲದಾಯಿತು. ಜತೆಗೆ ರಾಜ್ಯದಿಂದ ದೇಶದ ಹಲವು ಕಡೆಗೆ ರಫ್ತಾಗುತ್ತಿದ್ದ ರೇಷ್ಮೆನೂಲಿನ ಹರಿವು ನಿಂತಿದ್ದರಿಂದ ಗೂಡಿನ ಬೆಲೆ ಬೇಡಿಕೆಯೂ ದಿಢೀರ್‌ ಪಾತಾಳಕ್ಕೆ ಕುಸಿಯತೊಡಗಿತ್ತು.

ರಜೆ ಘೋಷಿಸಿದ್ದರು
ಲಾಕ್‌ಡೌನ್‌ನಿಂದ ರೀಲರುಗಳು ರೇಷ್ಮೆನೂಲನ್ನು ಬಿಚ್ಚುವ ಕಾರ‍್ಯವನ್ನೇ ನಿಲ್ಲಿಸಿ ಕೂಲಿ ಕಾರ್ಮಿಕರಿಗೆ ರಜೆ ಘೋಷಿಸಿದ್ದರು. ಇದೀಗ ಹಬ್ಬಗಳು ಮತ್ತಿತರ ಕಾರಣಗಳಿಂದ ರಾಜ್ಯದಲ್ಲಿಆರ್ಥಿಕ ಚಟುವಟಿಕೆ ಚೇತರಿಕೆ ಕಾಣುತ್ತಿರುವುದು ರೇಷ್ಮೆ ಸಂಬಂಧಿಸಿದ ಉದ್ಯಮಗಳು ಸುಧಾರಿಸಿಕೊಳ್ಳುವ ವಿಶ್ವಾಸ ಮೂಡಿಸಿದೆ.

ಸರಕಾರದ ಪಾತ್ರ ಪ್ರಮುಖ
ರೇಷ್ಮೆಗೂಡು ಹಾಗೂ ರೇಷ್ಮೆನೂಲಿನ ಬೆಲೆ ಕುಸಿಯುತ್ತಿದ್ದಂತೆ ರೈತರು ಹಾಗೂ ರೀಲರುಗಳ ಸಂಘಟನೆಯವರು ಸಹಾಯಕ್ಕಾಗಿ ಮುಖ್ಯಮಂತ್ರಿ, ರೇಷ್ಮೆ ಖಾತೆ ಸಚಿವರಿಗೆ ಮನವಿ ಮಾಡಿದ್ದರು. ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ ತನಕ ರೇಷ್ಮೆಗೂಡಿಗೆ ಬೆಂಬಲ ಬೆಲೆಯಾಗಿ 35 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಪ್ರತಿ ಕೆಜಿ ಮಿಶ್ರತಳಿಯ ಗೂಡಿಗೆ 30 ರೂ, ದ್ವಿತಳಿ ಗೂಡಿಗೆ 50 ರೂ.ಸಿಗಲಿದೆ. ಜತೆಗೆ ಈಗಾಗಲೆ ರೇಷ್ಮೆ ನೂಲು ಖರೀದಿ ಹಾಗೂ ಅಡಮಾನವಿಟ್ಟುಕೊಂಡು ಸಾಲ ನೀಡಲು 15 ಕೋಟಿಗಳನ್ನು ಬಿಡುಗಡೆ ಮಾಡಿತ್ತು. ಈಗಾಗಲೆ 12 ಕೋಟಿ ರೂ.ಗಳ ಬೆಲೆಯ ರೇಷ್ಮೆನೂಲನ್ನು ವಿನಿಮಯ ಕೇಂದ್ರಗಳ ಮೂಲಕ ಸರಕಾರ ಖರೀದಿಸಿದೆ.

ಬೆಂಗಳೂರು ನಗರ, ರಾಮನಗರ, ಕೊಳ್ಳೇಗಾಲ ಹಾಗೂ ಶಿಡ್ಲಘಟ್ಟ ರೇಷ್ಮೆ ವಿನಿಮಯ ಕೇಂದ್ರಗಳ ಮೂಲಕ ರೀಲರುಗಳಿಂದ ಪ್ರತಿ ಕೆಜಿ ರೇಷ್ಮೆ ನೂಲನ್ನು 2700 ರೂ.ಗಳಿಗೆ ನೇರವಾಗಿ ಸರಕಾರವೇ ಇಲಾಖೆ ಮೂಲಕ ಖರೀದಿ ಮಾಡುತ್ತಿದೆ. ಇದು ಕೂಡ ರೇಷ್ಮೆಗೂಡಿಗೆ ಬೇಡಿಕೆ ಹೆಚ್ಚಲು ಹಾಗೂ ಬೆಲೆ ಹೆಚ್ಚಲು ಕಾರಣವಾಗಿದೆ.